ದ್ವಿಜ ಅಂದರೆ ಎರಡನೆಯ ಹುಟ್ಟು ಪಡೆದವನೆಂದು.ತಾಯಿಯ ಗರ್ಭದಿಂದ ಜನಿಸುವಾಗ ಮೊದಲಹುಟ್ಟಾದರೆ ಉಪನಯನ ಸಂಸ್ಕಾರ ವಾದಾಗ ಎರಡನೆಯ ಹುಟ್ಟು ಪಡೆದು ದ್ವಿಜ ಎನಿಸುತ್ತಾನೆ. ಆದರೆ ದ್ವಿಜ ಎಂದರೆ ಬ್ರಾಹ್ಮಣ ಎಂದು ಸಾಮಾನ್ಯವಾಗಿ ಜನರು ಭಾವಿಸುತ್ತಾರೆ. ವಿವೇಕಾನಂದರು ಹುಟ್ಟಿನಿಂದ ಬ್ರಾಹ್ಮಣರೇ? ಅಲ್ಲ. ಅವರು ನಿಜವಾದ ದ್ವಿಜತ್ವ ಪಡೆದವರು. ತಾಯಿಯ ಗರ್ಭದಿಂದ ಜನಿಸಿ ನರೇಂದ್ರ ಹೆಸರು ಪಡೆದ ಮಗು ತನ್ನ ಯೌವ್ವನದಲ್ಲಿ ಸನ್ಯಾಸಿಯಾಗಿ ಸಂಚರಿಸುತ್ತಿರುವಾಗ ಶಿವಾನಂದ ಎಂದು ಜನರು ಕರೆದರು.ಅದೇ ಶಿವಾನಂದರು 1892 ಡಿಸೆಂಬರ್ 25 ರಂದು ಜಗನ್ಮಾತೆ ಕನ್ಯಾಕುಮಾರಿಯ ಮಡಿಲಲ್ಲಿ ನಮಸ್ಕರಿಸಿ ಕಡಲಿನ ಮಧ್ಯೆ ಬಂಡೆಯಲ್ಲಿ ಮೂರು ದಿನ ಕುಳಿತು ತಪಸ್ಸುಮಾಡುವಾಗ ತಾಯಿ ಭಾರತಿಯ ಗರ್ಭದಲ್ಲಿ ವಿವೇಕಾನಂದರ ಬೀಜಾಂಕುರವಾಯಿತು. ಅಲ್ಲಿಂದ ಸರಿಯಾಗಿ ಒಂಬತ್ತು ತಿಂಗಳು ತಾಯಿ ಭಾರತಿಯ ಗರ್ಭದಲ್ಲಿ ಸಂಸ್ಕಾರ ಪಡೆದು 1893 ಸಪ್ಟೆಂಬರ್ 11 ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾಷಣ ಮಾಡಿದಾಗ ಅವರು ತಾಯಿ ಭಾರತಿಯ ಹೆಮ್ಮೆಯ ಪುತ್ರ ವಿವೇಕಾನಂದರಾಗಿ ಎರಡನೆಯ ಜನ್ಮ ಪಡೆದರು. ಇದಲ್ಲವೇ ನಿಜವಾದ ದ್ವಿಜತ್ವ?!! ವಿವೇಕಾನಂದರು ಅಮೆರಿಕೆಯ ಚಿಕಾಗೋ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ ಇಂದಿಗೆ ಸರಿಯಾಗಿ 120 ವರ್ಷ ತುಂಬುತ್ತದೆ. ವಿವೇಕಾನಂದರ ಚಿಂತನೆಯಲ್ಲಿ ಮನಸ್ಸು ತೊಡಗಿದ್ದಾಗ ನನ್ನ ಮನದಲ್ಲಿ ಮೂಡಿದ ಚಿತ್ರಣ ಇದು.
No comments:
Post a Comment