ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Wednesday, 19 December 2012

ಸಂಕಲ್ಪ ದಿನ ವಿಶೇಷ ಲೇಖನ

swami-vivekananda

   ವಿವೇಕಾನಂದರ ಹೆಸರು ಕಿವಿಗೆ ಬಿದ್ದರೆ ಸಾಕು ಜನರಿಗೆ ರೋಮಾಂಚನ ವಾಗುತ್ತೆ.ಏಕೆ? ಏಕೆಂದರೆ  ಸ್ವಾಮಿ ವಿವೇಕಾನಂದರು ನಮಗಾಗಿ ಕಣ್ಣೀರಿಟ್ಟಿದ್ದಾರೆ. ವಿವೇಕಾನಂದರ ಬಗ್ಗೆ ಜನಮಾನಸರಲ್ಲಿ ಯಾವ ಭಾವನೆ ಇದೇ? ಎಂಬುದನ್ನು ತಿಳಿಯುವ ಅವಕಾಶ ಒಂದು  ಈಗ್ಗೆ ಸರಿಯಾಗಿ ಐವತ್ತು ವರ್ಷಗಳ ಹಿಂದೆ 1963ರಲ್ಲಿ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಒದಗಿ ಬಂತು. ಆಗ ಕೆಲವಾರು  ಸಾಮಾಜಿಕ ಕಾರ್ಯಕರ್ತರುಗಳು RSS ಜೊತೆಗೂಡಿ  ಚಿಂತನೆ ನಡೆಸಿ ವಿವೇಕಾನಂದರ ಸ್ಮಾರಕ ಒಂದನ್ನು ನಿರ್ಮಾಣ ಮಾಡಬೇಕೆಂದು ನಿರ್ಣಯಿಯಿಸಿದರು. ಸ್ಮಾರಕ ಎಲ್ಲಿ ಆಗಬೇಕು? ಭಾರತದ ಜನರ ಪುನರುತ್ಥಾನಕ್ಕಾಗಿ ಸ್ವಾಮಿ ವಿವೇಕಾನಂದರು 1892 ಡಿಸೆಂಬರ್ 25  ಮತ್ತು 26 ರಂದು  ಎರಡು ದಿನಗಳ ಕಾಲ ಸತತವಾಗಿ  ಕುಳಿತು ಎಲ್ಲಿ ಧ್ಯಾನವನ್ನು ಮಾಡಿದ್ದರೋ ಅಲ್ಲಿಯೇ ಸ್ಮಾರಕವನ್ನು ನಿರ್ಮಿಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯ್ತು.ಸ್ವರ್ಗೀಯ ಏಕನಾಥ್ ಜಿ ರಾನಡೆಯವರ ಪರಿಶ್ರಮದ ಫಲವಾಗಿ ಇಂದು ಶ್ರೀ ವಿವೇಕಾನಂದರ ರಾಷ್ಟ್ರೀಯ ಸ್ಮಾರಕವು ಕನ್ಯಾಕುಮಾರಿಯಲ್ಲಿ ನಮ್ಮೆಲ್ಲರನ್ನೂ ಸೆಳೆಯುತ್ತದೆ.
1892 ಡಿಸೆಂಬರ್ 25ಮತ್ತು 26 ರಂದು  ಎರಡು ದಿನಗಳ ಕಾಲ ಸ್ವಾಮಿ ವಿವೇಕಾನಂದರು ಸಾಗರದ ಮಧ್ಯೆ ಬಂಡೆಯ ಮೇಲೆ ಕುಳಿತು ತಮ್ಮ ಮುಕ್ತಿಗಾಗಿ, ಆಧ್ಯಾತ್ಮಿಕ ಸಾಧನೆಗಾಗಿ ಧ್ಯಾನವನ್ನು ಮಡಿದ್ದರೆ ಪ್ರಾಯಶ: ಇಂದು ವಿವೇಕಾನಂದರನ್ನು ಈ ಎತ್ತರದಲ್ಲಿ ಜನರು ನೋಡುತ್ತಿರಲಿಲ್ಲವೇನೋ, ಆದರೆ ಆ ಎಡು ದಿನ ಸ್ವಾಮೀಜಿ ಮಾಡಿದ್ದಾದರೂ ಏನು?
ಆಹೊತ್ತಿಗಾಗಲೇ ಭಾರತದ ಎಲ್ಲೆಡೆ ಸಂಚರಿಸಿದ್ದ ವಿವೇಕಾನಂದರಿಗೆ ಭಾರತದ ಅತ್ಯಂತ ಶ್ರೀಮಂತಿಗೆ ಹಾಗೂ ಭಾರತದ ಅತ್ಯಂತ ಬಡತನ, ಭಾರತದ ಅತ್ಯಂತ ಉನ್ನತ ಮಟ್ಟದ ವಿದ್ವಾಂಸರು ಹಾಗೂ ಅತ್ಯಂತ ಅವಿದ್ಯಾವಂತರು…ಹೀಗೆ ಸಮಾಜದ ಎಲ್ಲಾ ಸ್ಥರದ ಪರಿಚಯವು ಚೆನ್ನಾಗಿಯೇ ಆಗಿತ್ತು. ಅಂದಿನ ದಿನಗಳಲ್ಲಿ ಭಾರತದಲ್ಲಿದ್ದ ನೂರಾರು ರಾಜಮಹಾರಾಜರು ಹಾಗೂ ಶ್ರೀಮಂತರು ವಿವೇಕಾನಂದರನ್ನು ಕರೆದು ರಾಜೋಪಚಾರ ಮಾಡಿದರೆ ಬೇಡವೆನ್ನುತ್ತಿರಲಿಲ್ಲ. ಆದರೆ ಸಂಜೆಯ ಸಮಯದಲ್ಲಿ ಊರಿನ ಹೊರಗಿರುವ ಮುರುಕಲು ಜೋಪಡಿಯಲ್ಲಿ ವಾಸವಿರುತ್ತಿದ್ದ ದೀನ ದುರ್ಬಲರು ಕೊಟ್ಟ ಒಣಗಿದ ರೊಟ್ಟಿಯನ್ನು ತಿಂದು ದೇವಸ್ಥಾನದ ಜಗಲಿಯ ಮೇಲೆ ಮಲಗಲು ಬೇಸರ ಪಡುತ್ತಿರಲಿಲ್ಲ. ಎರಡೂ ರೀತಿಯ ಅನುಭವವು ವಿವೇಕಾನಂದರಿಗೆ ಇತ್ತು. ಶ್ರೀಮಂತರ ಮಹಲುಗಳ ಸನಿಹದಲ್ಲೇ ಬಡವರ ಗುಡಿಸಲುಗಳು, ಶ್ರೀಮಂತರ ಐಶಾರಮೀ ಜೀವನ ಒಂದುಕಡೆ ಇದ್ದರೆ, ಒಪ್ಪತ್ತಿನ ಊಟಕ್ಕಿಲ್ಲದೆ ಹಸಿವಿನಿಂದ ನೆರಳುವ, ಮಾನ ಮುಚ್ಚಲು ಬಟ್ಟೆಯಿಲ್ಲದ ನಿರ್ಗತಿಕ ಜನರು ಮತ್ತೊಂದೆಡೆ!!
ದೇವಾಲಯಗಳು ಒಂದೆಡೆಯಾದರೆ ಅದರ ಪಕ್ಕದಲ್ಲಿಯೇ ಕೊಳೆತು ನಾರುವ ಕಸದ ರಾಶಿಗಳು!! ವೇದಮಂತ್ರಗಳ ಧ್ವನಿ  ಎಲ್ಲಿಂದಲೋ ಕಿವಿಗೆ ಬೀಳುತ್ತಿದ್ದರೆ, ಮತ್ತೆಲ್ಲಿಂದಲೋ ನರಳುವ, ಕಿರಿಚಾಡುವ,ಗೋಳಾಡುವ ಧ್ವನಿಯೂ ಕಿವಿಯ ಮೇಲೆ ಬೀಳುತ್ತಿತ್ತು!!
ದೀನ ದಲಿತ, ದುರ್ಬಲ ಜನರ ಗೋಳಾಟವನ್ನು ಕಂಡ ವಿವೇಕಾನಂದರು ಮಮ್ಮಲ ಮರುಗಿದರು. ಏಕೆ ಹೀಗೆ!! ? ಭಾರತದಲ್ಲಿ ಹೇರಳವಾದ ಸಂಪತ್ತೂ ಇದೆ, ಅತ್ಯಂತ ಪ್ರಾಚೀನವಾದ ಜ್ಞಾನ ಸಂಪತ್ತೂ ಇದೆ.  ಆದರೂ ಜನರಲ್ಲಿ ಇಂತಹಾ ದಯನೀಯ ಸ್ಥಿತಿ  ಇದೆಯಲ್ಲಾ!
ಧ್ಯಾನದಲ್ಲಿದ್ದ ಆ ಎರಡೂ ದಿನಗಳೂ ವಿವೇಕಾನಂದರು ಭಾರತದಲ್ಲಿನ  ಜನರ ಕಷ್ಟಗಳನ್ನು  ನಿವಾರಿಸಲು ಸಮಾಜಕ್ಕಾಗಿ ಏನಾದರೂ  ಮಾಡಲೇ  ಬೇಕೆಂಬ ಖಚಿತ ನಿಲುವಿನೊಂದಿಗೆ ಧ್ಯಾನದಿಂದ ಹೊರಬಂದರು.ನಮ್ಮ ದೇಶದ ಅತ್ಯಂತ ಶ್ರೀಮಂತರು ಮತ್ತು ಅತ್ಯಂತ ಬಡವರು, ಈ ಎರಡೂ ವರ್ಗಗಳೊಡನೆ ಅತ್ಯಂತ ನಿಕಟ ಸಂಪರ್ಕವನ್ನಿಟ್ಟುಕೊಂಡು ಅವರೊಡನೆ ಸಮಾಲೋಚಿಸಿ ನಮ್ಮ ರಾಷ್ಟ್ರದ ಅಂದಿನ ಸ್ಥಿತಿಯನ್ನು ಸಂಪೂರ್ಣ ಅವಲೋಕನ ನಡೆಸಿದರು.ಆವರಗಿನ ತಮ್ಮ ದೇಶ ಪರ್ಯಟನೆಯಿಂದ ದೊರೆತಿದ್ದ ಅನುಭವದೊಡನೆ ತನ್ನ ದೇಶದ ಜನರ ನೋವು ನಿವಾರಿಸಲು ಜಗನ್ಮಾತೆ ಕನ್ಯಾಕುಮಾರಿ ಸನ್ನಿಧಿಯಲ್ಲಿ ಆ ಎರಡೂ ದಿನಗಳು ಧ್ಯಾನವನ್ನು ಮಾಡಿದ್ದರು.
ಧ್ಯಾನ ಮಾಡಲು ಆರಿಸಿಕೊಂಡ ಸ್ಥಳವಾದರೋ ಕನ್ಯಾಕುಮಾರಿ ದೇವಾಲದಿಂದ ಎರಡು ಫರ್ಲಾಂಗ್ ದೂರದಲ್ಲಿ ಸಮುದ್ರದ ಮಧ್ಯೆ ಕಾಣುತ್ತಿದ್ದ ಕಲ್ಲು ಬಂಡೆ!! ಆ ಬಂಡೆಯನ್ನು ತಲುಪುವುದಾದರೂ ಹೇಗೆ? ಅಲ್ಲೇ ಹತ್ತಿರದಲ್ಲಿ ಮೀನು ಹಿಡಿಯಲು ಬೆಸ್ತರು ಉಪಯೋಗಿಸುತ್ತಿದ್ದ ದೋಣಿಯವವರನ್ನು ಕೇಳಿದರು. ಆ ದೋಣಿಯವನಾದರೋ “ಒಂದಾಣೆ” ಕೊಡಬೇಕೆಂದ. ಸ್ವಾಮೀಜಿಯೊಡನೆ ಒಂದಾಣೆಯೂ ಇಲ್ಲ!  ಹಿಂದೆ ಮುಂದೆ ನೋಡದೆ ಸ್ವಾಮೀಜಿ ಸಮುದ್ರಕ್ಕೆ ಹಾರಿಯೇ ಬಿಟ್ಟರು!! ಅಲೆಗಳ ಏರಿಳಿತವನ್ನೂ ಲೆಕ್ಕಿಸದೆ ಅದನ್ನೂ ಭೇದಿಸಿಕೊಂಡು ಈಜುಹೊಡೆಯುತ್ತಾ ಎರಡು ಫರ್ಲಾಂಗ್ ದೂರದಲ್ಲಿದ್ದ ಬಂಡೆಯನ್ನು ತಲುಪಿಯೇ ಬಿಟ್ಟರು!! ಬಂಡೆಯಮೇಲೆ ಧ್ಯಾನಸ್ಥಿತಿಯಲ್ಲಿ ಕುಳಿತು ಬಿಟ್ಟರು! ಮನದಲ್ಲಿ ಮುಕ್ತಿಯ ವಿಚಾರವಿಲ್ಲ. ನಮ್ಮ ದೇಶದ ದೀನ ದು:ಖಿತ ಬಂದುಗಳ ಸೊರಗಿದ ಮುಖಗಳೇ, ಹಾಗೂ ದೀನ ಸ್ಥಿಯ ಕಣ್ಣುಗಳೇ ವಿವೇಕಾನಂದರ ಕಣ್ಮುಂದೆ ಸುಳಿದಾಡುತ್ತವೆ. ಹೃದಯದಲ್ಲಿ ದು:ಖ ಉಮ್ಮಳಿಸುತ್ತದೆ. ಮೊದಲೇ ತಿಳಿಸಿದಂತೆ ನಮ್ಮ ದೇಶವು ಒಂದುಕಾಲದಲ್ಲಿ ಸಂಪತ್ ಭರಿತವಾಗಿತ್ತು! ಅತ್ಯಂತ ಮೇಧಾವಿಗಳಿದ್ದ ದೇಶ ಇದು! ನೂರಾರು ಜನ ಋಷಿಮುನಿಗಳು ತಪಸ್ಸು ಮಾಡಿದ ನೆಲ ಇದು! ಆದರೆ…ಇಂತಹ  ಧರ್ಮ ಭೂಮಿಯಲ್ಲಿ ಅದೆಷ್ಟು ಜನ ಉಪವಾಸ ನೆರಳುತ್ತಿದ್ದಾರೆ! ಅದೆಷ್ಟು ಜನರಿಗೆ ಮಾನ ಮುಚ್ಚಲು ಬಟ್ಟೆ ಇಲ್ಲಾ!!  ಈ ಸ್ಥಿತಿಯಿಂದ ನಮ್ಮ ದೇಶವನ್ನು ಪಾರುಮಾಡುವ ಬಗೆಯಾದರೂ ಹೇಗೆ?...........................
ಈ ಲೇಖನ ಮುಂದುವರೆಯುತ್ತದೆ. ಆದರೆ  ಸ್ವಾಮೀ ವಿವೇಕಾನಂದರ ಹೃದಯದಲ್ಲಿ ಇಂತಾ ಚಿಂತನೆಗಳು ಬಂದು ಒಂದುನೂರ ಇಪ್ಪತ್ತು ವರ್ಷಗಳು ಕಳೆದಿವೆ. ಇಂದು ನಮ್ಮ ದೇಶ ಬದಲಾಗಿದೆಯೇ? ಸ್ವಾಮೀ ವಿವೇಕಾನಂದರ ಕನಸಿನಂತೆ       ಭಾರತದ ಪುನರುತ್ಥಾನ ವಾಗಿದೆಯೇ? ನಮ್ಮ ದೇಶದ ಸುಂದರ ಬದುಕನ್ನು ಹಂಬಲಿಸುವ ನಾಗರೀಕ ಬಂಧುಗಳೇ, 2013 ನೇ ವರ್ಷವು ದೇಶದಲ್ಲಿ  ಅತ್ಯಂತ ಮಹತ್ವದ ವರ್ಷವಾಗಲಿದೆ. ಸ್ವಾಮಿ ವಿವೇಕಾನಂದರ 150 ನೇ ಜನ್ಮವರ್ಷವನ್ನು ದೇಶಾದ್ಯಂತ ಆಚರಿಸಲಾಗುವುದು. ಅದರ ಆರಂಭದ ಕಾರ್ಯಕ್ರಮವಾಗಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೆಲೆ ಧ್ಯಾನ ಮಾಡಲು ಕುಳಿತ ದಿನವಾದ ಡಿಸೆಂಬರ್ 25 ರಂದು ದೇಶದೆಲ್ಲೆಡೆ “ಸಂಕಲ್ಪ ದಿನವನ್ನಾಗಿ”ಆಚರಿಸಲಾಗುತ್ತಿದೆ.ಅಂದು ಐದು ನಿಮಿಷ ಗಳ  ಕಾಲ ವಿವೇಕಾನಂದರ ಭಾವಚಿತ್ರದ ಮುಂದೆ ಕುಳಿತು ನಮ್ಮ ದೇಶದ ಇಂದಿನ ಸ್ಥಿತಿಯನ್ನು ಮನದಲ್ಲಿ ಮೂಡಿಸಿಕೊಂಡು  ಸಮಾಜದಲ್ಲಿರುವ ದು:ಖಿತರ  ನೋವು ನಿವಾರಣೆಗಾಗಿ ನಾನೇನು ಮಾಡಬಹುದೆಂದು ಸಂಕಲ್ಪ ಮಾಡುವ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತದೆ. ನಾವಿರುವ ಊರುಗಳಲ್ಲೇ ಕಾರ್ಯಕ್ರಮದ ವಿವರವನ್ನು ಕಾರ್ಯಕರ್ತರೊಡನೆ ಕೇಳಿ   ತಿಳಿದು ಕಾರ್ಯಕ್ರಮದಲ್ಲಿ ಭಾಗವಹಿಸೋಣ.
-ಹರಿಹರಪುರಶ್ರೀಧರ್

No comments:

Post a Comment