ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Thursday, 24 January 2013

ವಿಕೃತಿಗಳ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ



ಹೊಳೆನರಸೀಪುರ: ನಮ್ಮ ದೇಶ ಜ್ಞಾನ ಸಂಪತ್ತಿನಲ್ಲಿ ವಿಶ್ವಮಾನ್ಯತೆ ಪಡೆದಿದ್ದು, ವಿವಿಧ ಸಂಪತ್ತಿನಲ್ಲಿ ಯಾವುದೇ ರಾಷ್ಟ್ರಕ್ಕೂ ಕಡಿಮೆಯಿಲ್ಲದ ಈ ದೇಶದಲ್ಲಿ ಅಜ್ಞಾನ, ಅಸಮಾನತೆ ತಾಂಡವವಾಡುತ್ತಿದೆ ಎಂಬ ಅಂಶವೇ ವಿವೇಕಾನಂದರನ್ನು ಚಿಂತನೆಯ ಹೊಸ ಹಾದಿಯೆಡೆಗೆ ನಡೆಸಿತು ಎಂದು ಸಾಹಿತಿ ಮತ್ತು ವಾಗ್ಮಿಗಳೂ ಆದ ಹರಿಹರಪುರ ಶ್ರೀಧರ್ ತಿಳಿಸಿದರು.

 ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಭಾರತೀಯ ಸಂಸ್ಕೃತಿಯನ್ನು  ಚಿಕಾಗೋ ಸರ್ವ ಧರ್ಮ ಸಮ್ಮೇಳನದ ಮೂಲಕ ವಿವೇಕಾನಂದರು ವಿಶ್ವಕ್ಕೇ ಅಂದೇ ಸಾರಿದರು. ಇಂದಿನ ಯುವ ಸಮುದಾಯ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮರೆತು, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಗೆ ಒಳಗಾಗುತ್ತಿರುವ ಈ ಸನ್ನಿವೇಶದಲ್ಲಿ ನಮ್ಮ ವಿಕೃತಿಗಳ ವಿರುದ್ಧವೇ ಮೊದಲು ಹೋರಾಡಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ ಎಂದು ವಿಷಾದಿಸಿದರು.

 ಹರಿಹರಪುರ ಶ್ರೀಧರ್ ಮಾತನಾಡಿ, ವಿವೇಕಾನಂದರ ಚಿಂತನೆಗಳಾದ ಎಲ್ಲಾ ಸ್ತ್ರೀಯರೂ ನನ್ನ ತಾಯಂದಿರು, ಬೇರೆಯವರ ಹಣ ಮಣ್ಣಿಗೆ ಸಮಾನ ಮತ್ತು ಎಲ್ಲರಲ್ಲೂ ಭಗವಂತನಿದ್ದಾನೆ ಎನ್ನುವ ಅನುಭೂತಿ ನಮ್ಮೊಳಗೆ ಮೂಡಿದಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣ, ಕಾಶ್ಮೀರದಲ್ಲಿ ನಡೆದ ಭಾರತೀಯ ಸೈನಿಕರ ಕಗ್ಗೊಲೆಗಳಂತಹ ಸಾಮಾಜಿಕ ವಿಕೃತಿಗಳಿಂದ ಮುಕ್ತಿ ಸಾಧ್ಯ ಎಂದು ತಿಳಿಸಿದರು.  ಎಬಿವಿಪಿ ಜಿಲ್ಲಾ ಸಂಚಾಲಕ ಮಹಿಪಾಲ್ ಮಾತನಾಡಿ ವಿವೇಕಾನಂದರಂತಹ ಮಹಾನ್ ತಪಸ್ವಿ ಹುಟ್ಟಿದ ಈ ನಾಡಿನಲ್ಲಿ ನಮ್ಮ ರಾಷ್ಟ್ರವನ್ನು ಸದೃಢವಾಗಿ ಕಟ್ಟಲು ನಮ್ಮ ಶಕ್ತಿ ನೀಡುವ ಬದಲಿಗೆ ನಮ್ಮ ಹೊಸ ಉದಾತ್ತ ಚಿಂತನೆಗಳು ಹಾಗೂ ನಿರ್ಮಲವಾದ ಮನಸ್ಸುಗಳನ್ನು ನೀಡಬೇಕಿದೆ ಎಂದು ಕರೆ ನೀಡಿದರು.

 ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಈಶ್ವರಪ್ಪ ಮಾತನಾಡಿ, ವೈಭವದಿಂದ ಮೆರೆದ ನಮ್ಮ ದೇಶ ಇಂದು ಸಮಾಜದಲ್ಲಿ ನಡೆಯುತ್ತಿರುವ ಅರಾಜಕತೆ ಮತ್ತು ಅನಾಗರಿಕತೆಯ ದುಷ್ಟಶಕ್ತಿಗಳಿಂದ ಉಳಿಸಲು ವಿವೇಕಾನಂದರ ವಿವೇಚನೆಯುಳ್ಳ ವಾಣಿಗಳು ಹೆಚ್ಚು ಉಪಯುಕ್ತವೆನಿಸಿದೆ ಎಂದರು.

 ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರು ಹಾಗೂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಚಂದ್ರಕುಮಾರ್ ಮಾತನಾಡಿ, ವಿವೇಕಾನಂದರ ಬದುಕು ಮತ್ತು ಸಾಧನೆಗಳು ಇಂದಿನ ಯುವ ಸಮುದಾಯಕ್ಕೆ ದಾರಿ ದೀಪಗಳಾಗಬೇಕಿದೆ ಎಂದರು ಹೇಳಿದರು.

 ನಗರ ಪೊಲೀಸ್ ಠಾಣೆ ಎಸ್ಸೈ ಪಿ.ಶಿವಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವೇಕಾನಂದರ ಕುರಿತಾದ ನಾನಾ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.  ಪ್ರೊ.ರಾಜಶೇಖರ್, ಬಾಬೂ ಪ್ರಸಾದ್, ಎಬಿವಿಪಿಯ ಎಚ್.ಕೆ.ಅಮಿತ್, ಅರ್ಜುನ್ ಇತರರು ಇದ್ದರು.

[ಕನ್ನಡ ಪ್ರಭ ವರದಿ]

No comments:

Post a Comment