ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Tuesday, 25 December 2012

ಹಾಸನದಲ್ಲಿ ಸಂಕಲ್ಪ ದಿನ


ಸ್ವಾಮಿ  ವಿವೇಕಾನಂದ

ಹಾಸನದ ಶುಭೋದಯ ಕಲ್ಯಾಣಮಂಟಪದಲ್ಲಿ  ದಿನಾಂಕ 25.12.2012 ಮಂಗಳವಾರ ಸಂಜೆ 6.30 ರಿಂದ ಸ್ವಾಮಿವಿವೇಕಾನಂದರ 150ನೇ ಜನ್ಮ ವರ್ಷ ಅಭಿಯಾನದ ಪ್ರಯುಕ್ತ ಸಂಕಲ್ಪದಿನವನ್ನು ಆಚರಿಸಲಾಯ್ತು. ಶ್ರೀ ಹರಿಹರಪುರಶ್ರೀಧರ್ ಅವರು ಇಂದಿನ ದಿನದ ಮಹತ್ವವನ್ನು ತಿಳಿಸುತ್ತಾ ಇಂದಿಗೆ ಸರಿಯಾಗಿ 120 ವರ್ಷಗಳ ಹಿಂದೆ      ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ಮಧ್ಯೆ ಬಂಡೆಯಮೇಲೆ ಕುಳಿತು ಧ್ಯಾನ ಮಾಡಿ  ನಮ್ಮ ದೇಶದ ಕಟ್ಟಕಡೆಯ  ಬಡವನ  ಕಣ್ಣೀರು ನಿಲ್ಲುವವರೆಗೂ ತಾವು ವಿರಮಿಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದನ್ನು ಪ್ರಸ್ತಾಪಿಸಿ ನಾವೂ ಕೂಡ ಇಂದು ಅದೇ ಸಂಕಲ್ಪವನ್ನು ಮಾಡಿ ವಿವೇಕಾನಂದರ ವಿಚಾರವನ್ನು ದೇಶದೆಲ್ಲೆಡೆ ಪ್ರಚಾರಮಾಡುತ್ತಾ ವಿವೇಕಾನಂದರ  150ನೇ ಜನ್ಮ ವರ್ಷ ಅಭಿಯಾನದ  ಮಾಹಿತಿ ತಿಳಿಸಿ ಸಂಕಲ್ಪ ಹೇಗೆ ಮಾಡ ಬೇಕೆಂಬುದರ ಬಗ್ಗೆ ತಿಳಿಸಿದರು. ಶ್ರೀ ಹೊ.ಸು.ರಮೇಶ್  ಅವರು ಅಭಿಯಾನ ಗೀತೆಯನ್ನು ಹೇಳಿಕೊಟ್ಟರು. ಶ್ರೀ ಅನಂತನಾರಾಯಣ ಅವರು ಸಂಕಲ್ಪದ ನಂತರ ಶಾಂತಿಮಂತ್ರವನ್ನು ಆರಂಭಿಸಿದರೆ ಎಲ್ಲರೂ ಸಾಮೂಹಿಕವಾಗಿ ಶಾಂತಿಮಂತ್ರವನ್ನು ಹೇಳುವುದರ ಜೊತೆಗೆ ಕಾರ್ಯಕ್ರಮವು ಮುಕ್ತಾಯವಾಯ್ತು.


Wednesday, 19 December 2012

ಸಂಕಲ್ಪ ದಿನ ವಿಶೇಷ ಲೇಖನ

swami-vivekananda

   ವಿವೇಕಾನಂದರ ಹೆಸರು ಕಿವಿಗೆ ಬಿದ್ದರೆ ಸಾಕು ಜನರಿಗೆ ರೋಮಾಂಚನ ವಾಗುತ್ತೆ.ಏಕೆ? ಏಕೆಂದರೆ  ಸ್ವಾಮಿ ವಿವೇಕಾನಂದರು ನಮಗಾಗಿ ಕಣ್ಣೀರಿಟ್ಟಿದ್ದಾರೆ. ವಿವೇಕಾನಂದರ ಬಗ್ಗೆ ಜನಮಾನಸರಲ್ಲಿ ಯಾವ ಭಾವನೆ ಇದೇ? ಎಂಬುದನ್ನು ತಿಳಿಯುವ ಅವಕಾಶ ಒಂದು  ಈಗ್ಗೆ ಸರಿಯಾಗಿ ಐವತ್ತು ವರ್ಷಗಳ ಹಿಂದೆ 1963ರಲ್ಲಿ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಒದಗಿ ಬಂತು. ಆಗ ಕೆಲವಾರು  ಸಾಮಾಜಿಕ ಕಾರ್ಯಕರ್ತರುಗಳು RSS ಜೊತೆಗೂಡಿ  ಚಿಂತನೆ ನಡೆಸಿ ವಿವೇಕಾನಂದರ ಸ್ಮಾರಕ ಒಂದನ್ನು ನಿರ್ಮಾಣ ಮಾಡಬೇಕೆಂದು ನಿರ್ಣಯಿಯಿಸಿದರು. ಸ್ಮಾರಕ ಎಲ್ಲಿ ಆಗಬೇಕು? ಭಾರತದ ಜನರ ಪುನರುತ್ಥಾನಕ್ಕಾಗಿ ಸ್ವಾಮಿ ವಿವೇಕಾನಂದರು 1892 ಡಿಸೆಂಬರ್ 25  ಮತ್ತು 26 ರಂದು  ಎರಡು ದಿನಗಳ ಕಾಲ ಸತತವಾಗಿ  ಕುಳಿತು ಎಲ್ಲಿ ಧ್ಯಾನವನ್ನು ಮಾಡಿದ್ದರೋ ಅಲ್ಲಿಯೇ ಸ್ಮಾರಕವನ್ನು ನಿರ್ಮಿಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯ್ತು.ಸ್ವರ್ಗೀಯ ಏಕನಾಥ್ ಜಿ ರಾನಡೆಯವರ ಪರಿಶ್ರಮದ ಫಲವಾಗಿ ಇಂದು ಶ್ರೀ ವಿವೇಕಾನಂದರ ರಾಷ್ಟ್ರೀಯ ಸ್ಮಾರಕವು ಕನ್ಯಾಕುಮಾರಿಯಲ್ಲಿ ನಮ್ಮೆಲ್ಲರನ್ನೂ ಸೆಳೆಯುತ್ತದೆ.
1892 ಡಿಸೆಂಬರ್ 25ಮತ್ತು 26 ರಂದು  ಎರಡು ದಿನಗಳ ಕಾಲ ಸ್ವಾಮಿ ವಿವೇಕಾನಂದರು ಸಾಗರದ ಮಧ್ಯೆ ಬಂಡೆಯ ಮೇಲೆ ಕುಳಿತು ತಮ್ಮ ಮುಕ್ತಿಗಾಗಿ, ಆಧ್ಯಾತ್ಮಿಕ ಸಾಧನೆಗಾಗಿ ಧ್ಯಾನವನ್ನು ಮಡಿದ್ದರೆ ಪ್ರಾಯಶ: ಇಂದು ವಿವೇಕಾನಂದರನ್ನು ಈ ಎತ್ತರದಲ್ಲಿ ಜನರು ನೋಡುತ್ತಿರಲಿಲ್ಲವೇನೋ, ಆದರೆ ಆ ಎಡು ದಿನ ಸ್ವಾಮೀಜಿ ಮಾಡಿದ್ದಾದರೂ ಏನು?
ಆಹೊತ್ತಿಗಾಗಲೇ ಭಾರತದ ಎಲ್ಲೆಡೆ ಸಂಚರಿಸಿದ್ದ ವಿವೇಕಾನಂದರಿಗೆ ಭಾರತದ ಅತ್ಯಂತ ಶ್ರೀಮಂತಿಗೆ ಹಾಗೂ ಭಾರತದ ಅತ್ಯಂತ ಬಡತನ, ಭಾರತದ ಅತ್ಯಂತ ಉನ್ನತ ಮಟ್ಟದ ವಿದ್ವಾಂಸರು ಹಾಗೂ ಅತ್ಯಂತ ಅವಿದ್ಯಾವಂತರು…ಹೀಗೆ ಸಮಾಜದ ಎಲ್ಲಾ ಸ್ಥರದ ಪರಿಚಯವು ಚೆನ್ನಾಗಿಯೇ ಆಗಿತ್ತು. ಅಂದಿನ ದಿನಗಳಲ್ಲಿ ಭಾರತದಲ್ಲಿದ್ದ ನೂರಾರು ರಾಜಮಹಾರಾಜರು ಹಾಗೂ ಶ್ರೀಮಂತರು ವಿವೇಕಾನಂದರನ್ನು ಕರೆದು ರಾಜೋಪಚಾರ ಮಾಡಿದರೆ ಬೇಡವೆನ್ನುತ್ತಿರಲಿಲ್ಲ. ಆದರೆ ಸಂಜೆಯ ಸಮಯದಲ್ಲಿ ಊರಿನ ಹೊರಗಿರುವ ಮುರುಕಲು ಜೋಪಡಿಯಲ್ಲಿ ವಾಸವಿರುತ್ತಿದ್ದ ದೀನ ದುರ್ಬಲರು ಕೊಟ್ಟ ಒಣಗಿದ ರೊಟ್ಟಿಯನ್ನು ತಿಂದು ದೇವಸ್ಥಾನದ ಜಗಲಿಯ ಮೇಲೆ ಮಲಗಲು ಬೇಸರ ಪಡುತ್ತಿರಲಿಲ್ಲ. ಎರಡೂ ರೀತಿಯ ಅನುಭವವು ವಿವೇಕಾನಂದರಿಗೆ ಇತ್ತು. ಶ್ರೀಮಂತರ ಮಹಲುಗಳ ಸನಿಹದಲ್ಲೇ ಬಡವರ ಗುಡಿಸಲುಗಳು, ಶ್ರೀಮಂತರ ಐಶಾರಮೀ ಜೀವನ ಒಂದುಕಡೆ ಇದ್ದರೆ, ಒಪ್ಪತ್ತಿನ ಊಟಕ್ಕಿಲ್ಲದೆ ಹಸಿವಿನಿಂದ ನೆರಳುವ, ಮಾನ ಮುಚ್ಚಲು ಬಟ್ಟೆಯಿಲ್ಲದ ನಿರ್ಗತಿಕ ಜನರು ಮತ್ತೊಂದೆಡೆ!!
ದೇವಾಲಯಗಳು ಒಂದೆಡೆಯಾದರೆ ಅದರ ಪಕ್ಕದಲ್ಲಿಯೇ ಕೊಳೆತು ನಾರುವ ಕಸದ ರಾಶಿಗಳು!! ವೇದಮಂತ್ರಗಳ ಧ್ವನಿ  ಎಲ್ಲಿಂದಲೋ ಕಿವಿಗೆ ಬೀಳುತ್ತಿದ್ದರೆ, ಮತ್ತೆಲ್ಲಿಂದಲೋ ನರಳುವ, ಕಿರಿಚಾಡುವ,ಗೋಳಾಡುವ ಧ್ವನಿಯೂ ಕಿವಿಯ ಮೇಲೆ ಬೀಳುತ್ತಿತ್ತು!!
ದೀನ ದಲಿತ, ದುರ್ಬಲ ಜನರ ಗೋಳಾಟವನ್ನು ಕಂಡ ವಿವೇಕಾನಂದರು ಮಮ್ಮಲ ಮರುಗಿದರು. ಏಕೆ ಹೀಗೆ!! ? ಭಾರತದಲ್ಲಿ ಹೇರಳವಾದ ಸಂಪತ್ತೂ ಇದೆ, ಅತ್ಯಂತ ಪ್ರಾಚೀನವಾದ ಜ್ಞಾನ ಸಂಪತ್ತೂ ಇದೆ.  ಆದರೂ ಜನರಲ್ಲಿ ಇಂತಹಾ ದಯನೀಯ ಸ್ಥಿತಿ  ಇದೆಯಲ್ಲಾ!
ಧ್ಯಾನದಲ್ಲಿದ್ದ ಆ ಎರಡೂ ದಿನಗಳೂ ವಿವೇಕಾನಂದರು ಭಾರತದಲ್ಲಿನ  ಜನರ ಕಷ್ಟಗಳನ್ನು  ನಿವಾರಿಸಲು ಸಮಾಜಕ್ಕಾಗಿ ಏನಾದರೂ  ಮಾಡಲೇ  ಬೇಕೆಂಬ ಖಚಿತ ನಿಲುವಿನೊಂದಿಗೆ ಧ್ಯಾನದಿಂದ ಹೊರಬಂದರು.ನಮ್ಮ ದೇಶದ ಅತ್ಯಂತ ಶ್ರೀಮಂತರು ಮತ್ತು ಅತ್ಯಂತ ಬಡವರು, ಈ ಎರಡೂ ವರ್ಗಗಳೊಡನೆ ಅತ್ಯಂತ ನಿಕಟ ಸಂಪರ್ಕವನ್ನಿಟ್ಟುಕೊಂಡು ಅವರೊಡನೆ ಸಮಾಲೋಚಿಸಿ ನಮ್ಮ ರಾಷ್ಟ್ರದ ಅಂದಿನ ಸ್ಥಿತಿಯನ್ನು ಸಂಪೂರ್ಣ ಅವಲೋಕನ ನಡೆಸಿದರು.ಆವರಗಿನ ತಮ್ಮ ದೇಶ ಪರ್ಯಟನೆಯಿಂದ ದೊರೆತಿದ್ದ ಅನುಭವದೊಡನೆ ತನ್ನ ದೇಶದ ಜನರ ನೋವು ನಿವಾರಿಸಲು ಜಗನ್ಮಾತೆ ಕನ್ಯಾಕುಮಾರಿ ಸನ್ನಿಧಿಯಲ್ಲಿ ಆ ಎರಡೂ ದಿನಗಳು ಧ್ಯಾನವನ್ನು ಮಾಡಿದ್ದರು.
ಧ್ಯಾನ ಮಾಡಲು ಆರಿಸಿಕೊಂಡ ಸ್ಥಳವಾದರೋ ಕನ್ಯಾಕುಮಾರಿ ದೇವಾಲದಿಂದ ಎರಡು ಫರ್ಲಾಂಗ್ ದೂರದಲ್ಲಿ ಸಮುದ್ರದ ಮಧ್ಯೆ ಕಾಣುತ್ತಿದ್ದ ಕಲ್ಲು ಬಂಡೆ!! ಆ ಬಂಡೆಯನ್ನು ತಲುಪುವುದಾದರೂ ಹೇಗೆ? ಅಲ್ಲೇ ಹತ್ತಿರದಲ್ಲಿ ಮೀನು ಹಿಡಿಯಲು ಬೆಸ್ತರು ಉಪಯೋಗಿಸುತ್ತಿದ್ದ ದೋಣಿಯವವರನ್ನು ಕೇಳಿದರು. ಆ ದೋಣಿಯವನಾದರೋ “ಒಂದಾಣೆ” ಕೊಡಬೇಕೆಂದ. ಸ್ವಾಮೀಜಿಯೊಡನೆ ಒಂದಾಣೆಯೂ ಇಲ್ಲ!  ಹಿಂದೆ ಮುಂದೆ ನೋಡದೆ ಸ್ವಾಮೀಜಿ ಸಮುದ್ರಕ್ಕೆ ಹಾರಿಯೇ ಬಿಟ್ಟರು!! ಅಲೆಗಳ ಏರಿಳಿತವನ್ನೂ ಲೆಕ್ಕಿಸದೆ ಅದನ್ನೂ ಭೇದಿಸಿಕೊಂಡು ಈಜುಹೊಡೆಯುತ್ತಾ ಎರಡು ಫರ್ಲಾಂಗ್ ದೂರದಲ್ಲಿದ್ದ ಬಂಡೆಯನ್ನು ತಲುಪಿಯೇ ಬಿಟ್ಟರು!! ಬಂಡೆಯಮೇಲೆ ಧ್ಯಾನಸ್ಥಿತಿಯಲ್ಲಿ ಕುಳಿತು ಬಿಟ್ಟರು! ಮನದಲ್ಲಿ ಮುಕ್ತಿಯ ವಿಚಾರವಿಲ್ಲ. ನಮ್ಮ ದೇಶದ ದೀನ ದು:ಖಿತ ಬಂದುಗಳ ಸೊರಗಿದ ಮುಖಗಳೇ, ಹಾಗೂ ದೀನ ಸ್ಥಿಯ ಕಣ್ಣುಗಳೇ ವಿವೇಕಾನಂದರ ಕಣ್ಮುಂದೆ ಸುಳಿದಾಡುತ್ತವೆ. ಹೃದಯದಲ್ಲಿ ದು:ಖ ಉಮ್ಮಳಿಸುತ್ತದೆ. ಮೊದಲೇ ತಿಳಿಸಿದಂತೆ ನಮ್ಮ ದೇಶವು ಒಂದುಕಾಲದಲ್ಲಿ ಸಂಪತ್ ಭರಿತವಾಗಿತ್ತು! ಅತ್ಯಂತ ಮೇಧಾವಿಗಳಿದ್ದ ದೇಶ ಇದು! ನೂರಾರು ಜನ ಋಷಿಮುನಿಗಳು ತಪಸ್ಸು ಮಾಡಿದ ನೆಲ ಇದು! ಆದರೆ…ಇಂತಹ  ಧರ್ಮ ಭೂಮಿಯಲ್ಲಿ ಅದೆಷ್ಟು ಜನ ಉಪವಾಸ ನೆರಳುತ್ತಿದ್ದಾರೆ! ಅದೆಷ್ಟು ಜನರಿಗೆ ಮಾನ ಮುಚ್ಚಲು ಬಟ್ಟೆ ಇಲ್ಲಾ!!  ಈ ಸ್ಥಿತಿಯಿಂದ ನಮ್ಮ ದೇಶವನ್ನು ಪಾರುಮಾಡುವ ಬಗೆಯಾದರೂ ಹೇಗೆ?...........................
ಈ ಲೇಖನ ಮುಂದುವರೆಯುತ್ತದೆ. ಆದರೆ  ಸ್ವಾಮೀ ವಿವೇಕಾನಂದರ ಹೃದಯದಲ್ಲಿ ಇಂತಾ ಚಿಂತನೆಗಳು ಬಂದು ಒಂದುನೂರ ಇಪ್ಪತ್ತು ವರ್ಷಗಳು ಕಳೆದಿವೆ. ಇಂದು ನಮ್ಮ ದೇಶ ಬದಲಾಗಿದೆಯೇ? ಸ್ವಾಮೀ ವಿವೇಕಾನಂದರ ಕನಸಿನಂತೆ       ಭಾರತದ ಪುನರುತ್ಥಾನ ವಾಗಿದೆಯೇ? ನಮ್ಮ ದೇಶದ ಸುಂದರ ಬದುಕನ್ನು ಹಂಬಲಿಸುವ ನಾಗರೀಕ ಬಂಧುಗಳೇ, 2013 ನೇ ವರ್ಷವು ದೇಶದಲ್ಲಿ  ಅತ್ಯಂತ ಮಹತ್ವದ ವರ್ಷವಾಗಲಿದೆ. ಸ್ವಾಮಿ ವಿವೇಕಾನಂದರ 150 ನೇ ಜನ್ಮವರ್ಷವನ್ನು ದೇಶಾದ್ಯಂತ ಆಚರಿಸಲಾಗುವುದು. ಅದರ ಆರಂಭದ ಕಾರ್ಯಕ್ರಮವಾಗಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೆಲೆ ಧ್ಯಾನ ಮಾಡಲು ಕುಳಿತ ದಿನವಾದ ಡಿಸೆಂಬರ್ 25 ರಂದು ದೇಶದೆಲ್ಲೆಡೆ “ಸಂಕಲ್ಪ ದಿನವನ್ನಾಗಿ”ಆಚರಿಸಲಾಗುತ್ತಿದೆ.ಅಂದು ಐದು ನಿಮಿಷ ಗಳ  ಕಾಲ ವಿವೇಕಾನಂದರ ಭಾವಚಿತ್ರದ ಮುಂದೆ ಕುಳಿತು ನಮ್ಮ ದೇಶದ ಇಂದಿನ ಸ್ಥಿತಿಯನ್ನು ಮನದಲ್ಲಿ ಮೂಡಿಸಿಕೊಂಡು  ಸಮಾಜದಲ್ಲಿರುವ ದು:ಖಿತರ  ನೋವು ನಿವಾರಣೆಗಾಗಿ ನಾನೇನು ಮಾಡಬಹುದೆಂದು ಸಂಕಲ್ಪ ಮಾಡುವ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತದೆ. ನಾವಿರುವ ಊರುಗಳಲ್ಲೇ ಕಾರ್ಯಕ್ರಮದ ವಿವರವನ್ನು ಕಾರ್ಯಕರ್ತರೊಡನೆ ಕೇಳಿ   ತಿಳಿದು ಕಾರ್ಯಕ್ರಮದಲ್ಲಿ ಭಾಗವಹಿಸೋಣ.
-ಹರಿಹರಪುರಶ್ರೀಧರ್

Tuesday, 11 December 2012

ವಿವೇಕಾನಂದ-150 ಏನು? ಎಂತು?



ಯುವ ಭಾರತ:
“ಆಧುನಿಕ ಪೀಳಿಗೆಯಲ್ಲಿ, ಯುವ ಪೀಳಿಗೆಯಲ್ಲಿ ನನಗೆ ನಂಬಿಕೆಯಿದೆ. ಅವರಿಂದಲೇ ನನಗೆ ಬೇಕಾದ ಕಾರ್ಯಕರ್ತರು ಹೊರಹೊಮ್ಮುತ್ತಾರೆ. ಸಿಂಹದಂತೆ ಅವರು ಸಮಸ್ಯೆಯನ್ನು ನಿವಾರಿಸುತ್ತಾರೆ”. ಸ್ವಾಮಿ ವಿವೇಕಾನಂದರ ನಿರ್ಧಾರ ಹೀಗಿತ್ತು. ಭಾರತದ ಜನಸಂಖ್ಯೆಯ ಶೇಕಡಾ 55 ಜನರು ಯುವಕರು, ಹಿಂದಿನಿಂದಲೂ ಭಾರತವು ಯುವಕರ ದೇಶವಾಗಿದೆ.
ಯುವ ಶಕ್ತಿಯ ಆಶ್ರಯದಲ್ಲಿ ವಿದ್ಯಾರ್ಥಿಗಳು ಮತ್ತು 18-40 ವರ್ಷ ವಯೋಮಾನದ ವಿದ್ಯಾರ್ಥಿಗಳಲ್ಲದ ಯುವಕರು ಸ್ವಾಮಿ ವಿವೇಕಾನಂದ ಯುವ ಮಂಡಲಿ, ಎಚ್ಚೆತ್ತ ಯುವಕರ ವೇದಿಕೆ, ವಿವೇಕಾನಂದ ಕ್ಲಬ್‌ಗಳ ಮೂಲಕ ಸಕ್ರಿಯರಾಗಲು ಉತ್ತೇಜಿಸಲಾಗುತ್ತದೆ. ಈ ಸಂಘಟನೆಗಳು ಸ್ಥಾನೀಯ ಅವಶ್ಯಕತೆಗಳು ಮತ್ತು ಪ್ರಕೃತಿಗೆ ಅನುಗುಣವಾಗಿ ಕಾರ್ಯವನ್ನು ನಡೆಸುತ್ತವೆ. ಶಕ್ತಿ ಹಾಗೂ ಸುರಕ್ಷೆ, ಸ್ವಾಧ್ಯಾಯ ಮತ್ತು ಸೇವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತವೆ.
ಶಕ್ತಿ: ಸಾಮೂಹಿಕ ಸೂರ್ಯನಮಸ್ಕಾರ” ಕಾರ್ಯಕ್ರಮಗಳನ್ನು ದೇಶದ ಪ್ರತಿಯೊಂದು ನಗರ ಮತ್ತು ಪಟ್ಟಣಗಳಲ್ಲಿ ರಥ ಸಪ್ತಮಿಯಂದು (ಫಬ್ರವರಿ 17, 2012) ನಡೆಸಲಾಗುತ್ತದೆ.
ಸ್ವಾಧ್ಯಾಯ: 2013ರಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಸೇವೆ: ಯುವಕರು ಸೇವಾ ಕಾರ್ಯಗಳಲ್ಲಿ ತೊಡಗುವಂತೆ ಮಾಡಲು “ವಿವೇಕಾನಂದ ಸೇವಾ ಫೆಲೋಶಿಪ್” ಪ್ರಾರಂಭಿಸಕಾಗುತ್ತದೆ.
----------------------------------------------------------------------------
ಸಂವರ್ಧಿನಿ:
“ಶಕ್ತಿಯಿಲ್ಲದೆ ಪುನರುತ್ಥಾನ ಸಾಧ್ಯವಿಲ್ಲ. ನಮ್ಮ ದೇಶವು ಮಿಕ್ಕೆಲ್ಲಾ ದೇಶಗಳಿಗಿಂತ ದುರ್ಬಲವಾಗಲು ಹಾಗೂ ಹಿಂದುಳಿಯಲು ಕಾರಣವೇನು? – ಏಕೆಂದರೆ, ಶಕ್ತಿಯನ್ನು ಅಲ್ಲಿ ಅಪಮಾನಿಸಲಾಗುತ್ತದೆ. ಶಕ್ತಿಯ ಅನುಗ್ರಹವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.
ನಮ್ಮ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸುವಂತಾಗಲು ಸಹಭಾಗಿತ್ವ, ಸೇವಾ, ವಿಕಾಸ, ಸಂಸ್ಕೃತಿ ಮತ್ತು ಸಮರಸತೆ ಹೆಸರುಗಳಲ್ಲಿ ಕಾರ್ಯಕ್ರಮಗಳು ನಡೆಸಲಾಗುತ್ತದೆ.
1. ದಂಪತಿ ಸಮ್ಮೇಳನ – ಸಾಮಾಜಿಕ ಪುನರುತ್ಥಾನದ ಕಾರ್ಯಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಮಹತ್ವದ ಕುರಿತಾಗಿ ಅರಿವು ಮೂಡಿಸಲು ಮತ್ತು ಅಂತಹ ಸಮಯದಲ್ಲಿ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯಕವಾಗುವಂತೆ ಮಾಡಲು, ಅರ್ಧ ದಿನ ಅಥವಾ ಒಂದು ದಿನದ ದಂಪತಿಗಳ ಸಮಾವೇಶ ನಡೆಸಲಾಗುವುದು.
2. ಶಕ್ತಿ ಸಮ್ಮೇಳನ – ಮಹಿಳೆಯು ತನ್ನ ಸಾಮರ್ಥ್ಯವನ್ನು ಮನಗಾಣಲು ಮತ್ತು ರಾಷ್ಟ್ರೀಯ ಪುನರುತ್ಥಾನದ ಕಾರ್ಯದಲ್ಲಿ ತನ್ನ ಪಾತ್ರವನ್ನು ತಿಳಿಯಲು, ಶಕ್ತಿ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇವುಗಳಲ್ಲಿ,
ಅ) ಪ್ರದರ್ಶನ: “ಭಾರತೀಯ ಮಹಿಳೆ – ವಿವಿಧ ಕಾಲಗಳಲ್ಲಿ”, “ಭಾರತದ ವಿವಿಧ ಮಹಿಳಾಮಣಿಗಳು” ಮತ್ತು “ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು”.
ಆ) ಮಹಿಳಾ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಭಾಷಣಗಳು ಮತ್ತು ಪ್ರಶಿಕ್ಷಣಗಳು.
-------------------------------------------------------------------------
ಪ್ರಬುದ್ಧ ಭಾರತ:
ಸ್ವಾಮಿ ವಿವೇಕಾನಂದರು, “ಯಾರು ಇತರರಿಗಾಗಿ ಬದುಕುತ್ತಾರೋ, ಅವರೇ ನಿಜವಾಗಿ ಬದುಕುವವರು. ಇತರರು ಬದುಕಿಯೂ ಸತ್ತಂತೆಯೇ” ಎಂದು ಹೇಳಿದ್ದಾರೆ.
ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಗಣ್ಯರು ಮತ್ತು ಬುದ್ಧಿಜೀವಿಗಳಿಗೆ ಬಹಳ ದೊಡ್ಡ ಜವಾಬ್ದಾರಿಯಿದೆ. ಸಮಾಜದ ಎಲ್ಲಾ ರಂಗಗಳಲ್ಲಿರುವ ಇಂತಹ ಚಿಂತಕರನ್ನು ಮತ್ತು ಪ್ರಭಾವಿ ವ್ಯಕ್ತಿಗಳನ್ನು ತೊಡಗಿಸಲು ಈ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತದೆ.
1. ವಿಮರ್ಶ: ಪ್ರಮುಖ ವಿಷಯಗಳ ಕುರಿತಾಗಿ ಭಾಷಣಗಳು.
2. ಯೋಗ ಪ್ರತಿಮೆಗಳು (ಯೋಗದ ಆಧಾರದ ಮೇಲೆ ಶಿಕ್ಷಣ ಕೂಟಗಳು). ಹಿರಿಯ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ಅರೆಸೈನಿಕ ಮತ್ತು ರಕ್ಷಣಾಪಡೆಗಳಲ್ಲಿರುವವರು, ಶಾಲಾ ಆಡಳಿತದಲ್ಲಿರುವವರು, ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿರುವವರು, ಸರಕಾರೇತರ ಸಂಸ್ಥೆಗಳ ಪ್ರಮುಖರು ಮತ್ತು ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಪಂಚಾಯತ್ ಅಧ್ಯಕ್ಷರು, ಇತ್ಯಾದಿ ಜನಪ್ರತಿನಿಧಿಗಳಿಗೆ.
3. ಗೋಷ್ಠಿಗಳು – ಸ್ವಾಮಿ ವಿವೇಕಾನಂದರ ವಿಷಯದ ಕುರಿತಾಗಿ, ಚಾರಿತ್ರಿಕ ಮಹತ್ವದ, ನಾಗರೀಕತೆಗೆ ಸಂಬಂಧಿಸಿದಂತೆ ಮಹತ್ವದ ಹಾಗೂ ಸಾಂಸ್ಕೃತಿಕ ಮಹತ್ವದ ಸಂಗತಿಗಳು ಮತ್ತು ವರ್ತಮಾನದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತವೆನಿಸುವಂತಹ ವಿಷಯಗಳನ್ನಿಟ್ಟುಕೊಂಡು, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗೋಷ್ಠಿಗಳು ಮತ್ತು ಸಮ್ಮೇಳನಗಳು.
4. ಭಾಗವಹಿಸುವಿಕೆ – ಸ್ವಾಮಿ ವಿವೇಕಾನಂದರ ವ್ಯಕ್ತಿ ನಿರ್ಮಾಣ ಮತ್ತು ಚಾರಿತ್ರ್ಯ ನಿರ್ಮಾಣದ ಸಂದೇಶವನ್ನಿಟ್ಟುಕೊಂಡು ಬುದ್ಧಿಜೀವಿಗಳು ಲೇಖನಗಳನ್ನು ಬರೆಯುವಂತೆ ಮಾಡುವುದು ಮತ್ತು ಮಾತನಾಡುವಂತೆ ಮಾಡುವುದು.
--------------------------------------------------------------------------------------
ಗ್ರಾಮಾಯಣ:
“ಹೊಸ ಭಾರತವು ಏಳಲಿ……..ಅವಳು ಮೇಲೇಳಲಿ – ರೈತನ ಗುಡಿಸಲುಗಳಲ್ಲಿ ನೇಗಿಲುಗಳನ್ನು ಹಿಡಿದುಕೊಂಡು; ಬೆಸ್ತರ ಗುಡಿಸಲುಗಳಲ್ಲಿ,……ಕಿರಾಣಿ ಅಂಗಡಿಗಳಲ್ಲಿ ಅವಳು ಹೊರ ಹೊಮ್ಮಲಿ,  ಮನೆ ಯಲ್ಲಿನ ಒಲೆಗಳಿಂದ ಹೊಮ್ಮಲಿ. ಆಕೆ ತೋಪುಗಳಿಂದ ಹಾಗೂ ಕಾಡುಗಳಿಂದ, ಬೆಟ್ಟ ಹಾಗೂ ಪರ್ವತಗಳಿಂದ ಹೊರಹೊಮ್ಮಲಿ” ಈ ರೀತಿಯಾಗಿ ಕೊಲಂಬೋದಿಂದ ಅಲ್ಮೋರಾವರೆಗಿನ ಭಾಷಣಗಳಲ್ಲಿ ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ.
ಗ್ರಾಮಾಯಣದ ಉದ್ದೇಶ, ಸಮಾಜದಲ್ಲಿ ಗ್ರಾಮ ಜೀವನದ ಕುರಿತಾಗಿ ಹೆಮ್ಮೆಯನ್ನುಂಟು ಮಾಡುವುದು. ದೇಶದಲ್ಲಿರುವ 6 ಲಕ್ಷ ಗ್ರಾಮಗಳನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಲು, ಗ್ರಾಮ ಮಟ್ಟದ ಸಮಿತಿಗಳನ್ನು ಮಾಡಲಾಗುವುದು. ಸ್ಥಾನೀಯ ಪದ್ಧತಿ ಮತ್ತು ಸಂಪ್ರದಾಯಕ್ಕನುಗುಣವಾಗಿ ಅವರು ಕಾರ್ಯಕ್ರಮಗಳನ್ನು ಆಯೋಜಿಸುವರು. ಭಾರತ ಮಾತಾ ಪೂಜನ, ಕಥಾ ಕೀರ್ತನ, ಮೇಳ, “ಮೇರಾ ಗಾಂವ್ ಮೇರಾ ತೀರ್ಥ್”, ಇತ್ಯಾದಿಗಳು.
ನಗರವಾಸಿ ಯುವಕರು ಗ್ರಾಮಗಳಲ್ಲಿನ ಕಾರ್ಯಕ್ಕೆ ಸಮಯ ನೀಡುವಂತೆ ಪ್ರೇರೇಪಿಸಲು, ವಿವೇಕ ಗ್ರಾಮ್ ಅಥವಾ ಅಸ್ಪೃಷ್ಯತೆಯ ಆಚರಣೆಯಿಲ್ಲದ, ಮತಾಂತರ ನಡೆಯದ, ವ್ಯಸನಮುಕ್ತ, ಪೊಲೀಸರ ಹಾಗೂ ನ್ಯಾಯಾಲಯಗಳ ಮೇಲೆ ಅವಲಂಬಿತವಾಗಿರದ, ರಾಸಾಯನಿಕ ಗೊಬ್ಬರಗಳನ್ನುಪಯೋಗಿಸದ ಗ್ರಾಮಗಳ ನಿರ್ಮಾಣಕ್ಕಾಗಿ,  ದೀರ್ಘಕಾಲೀನ ಸೇವಾ ಪ್ರಕಲ್ಪಗಳಲ್ಲಿ ಅವರನ್ನು ತೊಡಗಿಸುವುದು. ನಗರಗಳಲ್ಲಿರುವ ಗ್ರಾಮದಂತಿರುವ ಪ್ರದೇಶಗಳನ್ನೂ ಸಹ ವಿವೇಕ ಬಸ್ತಿಯನ್ನಾಗಿ ಅಭಿವೃದ್ಧಿ ಮಾಡಲಾಗುವುದು.
---------------------------------------------------------------------------------
ಅಸ್ಮಿತಾ:
“ದೇಶದ ಭವಿಷ್ಯವು ದುರ್ಬಲರ   ಜನರ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಅವರನ್ನು ನೀವು ಎಬ್ಬಿಸಬಲ್ಲಿರಾ? ಅವರ ಆಂತರಿಕ ಆಧ್ಯಾತ್ಮಿಕ ಪ್ರಕೃತಿಯನ್ನು ಕಳೆದುಹಾಕದೆ, ಅವರು ಕಳೆದುಕೊಂಡಿರುವ ತಮ್ಮತನವನ್ನು ಅವರಿಗೆ ನೀವು ನೀಡಬಲ್ಲಿರೇನು?” ಈ ರೀತಿಯಾಗಿ ವಿವೇಕಾನಂದರು ಪಂಥಾಹ್ವಾನ ನೀಡಿದರು.
ವನವಾಸಿಗಳಿಗೆ, ಅವರ ಸಾಂಸ್ಕೃತಿಕ ಹಾಗೇ ಮತೀಯ ಸಂಪ್ರದಾಯಗಳೇ ಅವರ ಗುರುತು ಮತ್ತು ಅದೇ ಆ ಸಮಾಜವನ್ನು ಒಂದಾಗಿಡುತ್ತದೆ ಹಾಗೂ ಪ್ರಕೃತಿಗೆ ಅನುಗುಣವಾಗಿರುವಂತೆ ಇಡುತ್ತದೆ. ಸಂಪ್ರದಾಯಗಳು ನಷ್ಟವಾದರೆ ಜನಜಾತಿಗಳು ತಮ್ಮ ಗುರುತು, ನೈತಿಕ ಮೌಲ್ಯಗಳು ಮತ್ತು ಶಾಂತಿಯನ್ನು ಕಳೆದುಕೊಂಡು ಬಿಡುತ್ತವೆ. ಸಮಯವು ಸರಿದಂತೆ ಮುನ್ನಡೆಯಲು, ಸಾಂಸ್ಕೃತಿಕ ಸಂಪ್ರದಾಯಗಳ ಮೂಲಕ ಅಭಿವೃದ್ಧಿ ಹೊಂದಲು ಅವರಿಗೆ ಆತ್ಮವಿಶ್ವಾಸ ಬೇಕು. ಇದಕ್ಕಾಗಿ ವನವಾಸಿ ಕ್ಷೇತ್ರಗಳಲ್ಲಿ, ಅವರಿಗೆ ತಮ್ಮ ಸಂಪ್ರದಾಯಗಳು ಹಾಗೂ ಸಂಸ್ಕೃತಿಗಳಲ್ಲಿ ಶ್ರದ್ಧೆ ಹೆಚ್ಚೆಚ್ಚು ಗಟ್ಟಿಯಾಗುವಂತೆ ಮಾಡಲು “ಸಂಸ್ಕೃತಿಯ ಮೂಲಕ ಅಭಿವೃದ್ಧಿ” ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
1. ಜನಜಾತಿ ವೇದಿಕೆಗಳ ಸಮ್ಮೇಳನಗಳು
2. ಗ್ರಾಮೀಣ ಮುಖ್ಯಸ್ಥರ ಸಭೆಗಳು
3. ದೇಶೀಯ ನಂಬಿಕೆಗಳನ್ನು ಗಟ್ಟಿಮಾಡಲು ಜನಜಾತಿ ಉತ್ಸವ ಪೂರ್ಣ ಬೆಂಬಲ.
4. ಸಂಪ್ರದಾಯ, ವೈಜ್ಞಾನಿಕ ಆಧಾರ ಮತ್ತು ಮುಂದುವರಿಕೆಯ ಕುರಿತಾಗಿ ವಿಚಾರ ಸಂಕಿರಣಗಳು.
5. ಸ್ವಾಮೀಜಿಯವರ ಕುರಿತಾಗಿ ಮತ್ತು ಅವರ ಸಂದೇಶವನ್ನು ಸಾರುವ ವಿಡಿಯೋಗಳು.